Pune Kannadigara Balaga - ಪುಣೆ ಕನ್ನಡಿಗರ ಬಳಗ
  Event Updates - ಬೆಳವಣಿಗೆಗಳು
 

Event Updates - ಬೆಳವಣಿಗೆಗಳು

ಮೊದಲೆರಡು ಮಾತುಗಳು

"ಪುಣೆಯಲ್ಲಿ ಕನ್ನಡದ ಕಹಳೆ...!!!"


ಕಳೆದ ಮೂರು ವಾರಾಂತ್ಯಗಳಿಂದ ನಿಯಮಿತವಾಗಿ ಭೇಟಿಯಾಗಿ, ಪುಣೆ ನಗರದಲ್ಲಿನ ಕನ್ನಡ ಸಮುದಾಯದಲ್ಲಿ ಹೊಸ ಉತ್ಸಾಹ ಮೂಡಿಸುವಂತ, ಕಾರ್ಯಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶದಿಂದ, ಅಂತಹ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸುತ್ತ, ಈ ದಿಸೆಯಲ್ಲಿ,ಕೂಡಲೇ ಮಾಡಬೇಕಾದ ಕೆಲಸಗಳನ್ನು ಪಟ್ಟಿಮಾಡಿಕೊಂಡು, ಅವುಗಳನ್ನು ಚಾಚೂತಪ್ಪದಂತೆ ನಿರ್ವಹಿಸುತ್ತಿರುವ ರೀತಿಯನ್ನು ನೋಡಿದಾಗ, ಉದ್ಧರಣ ಚಿಹ್ನೆಗಳ ನಡುವಿನ ಮೇಲಿನ ಉದ್ಗಾರವು ಅತಿಶಯೋಕ್ತಿಯೆನಿಸಲಾರದು.
ಸಾವಿರ ವರ್ಷಗಳ ಹಿಂದಿನಿಂದಲೇ ಕನ್ನಡದ ನಂಟಿರುವ ಪುಣೆ ನಗರದಲ್ಲಿ, ಕಾರ್ಮಿಕರು, ಸರ್ಕಾರಿ ನೌಕರರು, ವ್ಯಾಪಾರಸ್ಥರು ಮೊದಲಾದ ಎಲ್ಲ ವರ್ಗಗಳ ಕನ್ನಡ ಜನರನ್ನು ಕಾಣಬಹುದು. ಪುಣೆ ನಗರದ ಯಾವ ಮೂಲೆಗೆ ಹೋದರೂ ಕನ್ನಡದ ಮಾತುಗಳು ಪದೇ ಪದೇ ಕಿವಿಗೆ ಕೇಳಿಸುತ್ತಿರುತ್ತವೆ. ಪುಣೆ ನಗರದ ಸ್ಥಳೀಯ ಸಂಸ್ಥೆಗಳಲ್ಲಿ(ಮಹಾನಗರಪಾಲಿಕೆ, ವಾರ್ಡ ಸಮಿತಿ) ಕನ್ನಡಿಗರು ಗಣನೀಯ ಸ್ಥಾನಗಳನ್ನು ಪಡೆದಿದ್ದಾರೆ.
ಇಷ್ಟಾಗಿಯೂ, ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ, ಸಾಂಸ್ಕೃತಿಕ ವಾತಾವರಣವನ್ನು ಉಳಿಸಿಕೊಳ್ಳುವಲ್ಲಿ, ಇಡೀ ಪುಣೆ ನಗರದ ಕನ್ನಡ ಸಮುದಾಯ ಸೋತಿದೆ. ಅಷ್ಟರಮಟ್ಟಿಗೆ, ಕನ್ನಡದ ಹರವು ಸೀಮಿತವಾಗಿ, ಮನೆಯ ಭಾಷೆಯಾಗಿ ಮಾತ್ರ ಕನ್ನಡವು ಉಳಿದುಕೊಂಡಿದೆ. ಇಂತಹ ಸಾಂಸ್ಕೃತಿಕ ಪರಿಸರವೊಂದನ್ನು ಕಟ್ಟಿ ಬೆಳೆಸಿ, ಜೀವಂತವಾಗಿರಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಲು, ಪುಣೆ ಕನ್ನಡಿಗರ ಬಳಗ ಉತ್ಸುಕವಾಗಿದೆ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ, ಕನ್ನಡ ಚಲನಚಿತ್ರಗಳನ್ನು ಪುಣೆಯಲ್ಲಿ ತೆರೆಕಾಣಿಸುವುದು, ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನೊಳಗೊಂಡ 'ಸಾಂಸ್ಕೃತಿಕ ಸಂಜೆ'ಯೊಂದನ್ನು ಆಯೋಜಿಸುವುದು ಬಳಗದ ಸದ್ಯದ ಯೋಜನೆಗಳು.

_________________________________________________(On 07th May'07 by Rohit R)___

ಬೆಳವಣಿಗೆಗಳು

ಈ ದಿಸೆಯಲ್ಲಿ ಇಂದಿನವರೆಗೂ ನಡೆದಿರುವ ಪೂರ್ವತಯಾರಿಗಳ ವಿವರ:
೧. ಪುಣೆಯ ತಾಲಿವಾಡ ರಸ್ತೆಯಲ್ಲಿರುವ ಬಸವೇಶ್ವರ ಸೇವಾ ಸಂಘವನ್ನು ಸಂಪರ್ಕಿಸಿ, ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಮಾಹಿತಿಯನ್ನು ಪಡೆಯಲಾಗಿದೆ.
೨. ಲಕ್ಷ್ಮಿ ರಸ್ತೆ ಹಾಗೂ ಚಿಂಚವಡದಲ್ಲಿರುವ ರಾಘವೇಂದ್ರ ಮಠಗಳಿಂದ ಕನ್ನಡ ಜನರಿಗೆ ಮಾಹಿತಿ ತಲುಪಿಸುವಲ್ಲಿ, ಪ್ರಚಾರದ ನೆರವಿನ ಭರವಸೆ ದೊರೆತಿದೆ.
೩. ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿರುವ "ಮುಂಗಾರು ಮಳೆ" ಚಲನಚಿತ್ರವನ್ನು ಪುಣೆ ನಗರದ ಪ್ರಮುಖ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಪ್ರಯತ್ನವಾಗಿ, ಐನಾಕ್ಸ್, ರತನ್, ಈ-ಸ್ಕ್ವೇರ್‍, ಗುಂಜನ್ ಚಿತ್ರಮಂದಿರಗಳನ್ನು ಸಂಪರ್ಕಿಸಿ ಪೂರಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಚಿತ್ರವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಬಿಡುಗಡೆ ಮಾಡಲು ಹಕ್ಕುಗಳನ್ನು ಹೊಂದಿರುವ ವಿತರಕರೊಂದಿಗೆ ಸಂಪರ್ಕದಲ್ಲಿದ್ದು, ಮುಂದಿನ ಒಂದು ವಾರದಲ್ಲಿ ಈ ಚಿತ್ರವನ್ನು ನೋಡುವ ಸೌಭಾಗ್ಯ ಪುಣೆ ಕನ್ನಡಿಗರದಾಗಬಹುದೆಂಬ ನಿರೀಕ್ಷೆಯಿದೆ.
೪. ಪಿಂಪ್ರಿ-ಚಿಂಚವಡದ ಮಹಾನಗರಪಾಲಿಕೆಯ ಮಾಜಿ ಉಪಮಹಾಪೌರರಾದ, ಕನ್ನಡಿಗ ಶ್ರೀ ಶೇಷಪ್ಪ ನಾಟೇಕರರನ್ನು ಭೇಟಿಯಾಗಿ ಕನ್ನಡ ಸಮುದಾಯದಲ್ಲಿ ವಿಶ್ವಾಸವೃದ್ಧಿಯ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ.
೫. ಕೇತ್ಕರ ರಸ್ತೆಯಲ್ಲಿರುವ ಕನ್ನಡ ಸಂಘ, ಪುಣೆ ಹಾಗೂ ಕೊತ್ರೂಡಿನಲ್ಲಿರುವ ಕರ್ನಾಟಕ ಸಂಘದೊಂದಿಗೂ, ನಿರಂತರ ಸಂಪರ್ಕದಲ್ಲಿದ್ದು, ಯೋಜಿತ ಕಾರ್ಯಕ್ರಮಗಳಿಗೆ, ಕನ್ನಡ ಜನರನ್ನು ಒಟ್ಟುಗೂಡಿಸುವ, ಪ್ರಯತ್ನವನ್ನು ನಡೆಸಲಾಗುತ್ತಿದೆ.
೬. 'ಸಾಂಸ್ಕೃತಿಕ ಸಂಜೆ' ಕಾರ್ಯಕ್ರಮಕ್ಕೆ, ಕನ್ನಡ ಚಿತ್ರರಂಗದ ಪ್ರಮುಖರೊಬ್ಬರನ್ನು ಅತಿಥಿಯಾಗಿ ಕರೆತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನ ಗೆಳೆಯರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ.

_________________________________________________(On 07th May'07 by Rohit R)___

 

 

 

 

  Home

 

This site belongs to Pune Kannadigara Balaga

 

 
 
  Today, there have been 5 visitors (18 hits) on this page!  
 
This website was created for free with Own-Free-Website.com. Would you also like to have your own website?
Sign up for free