ನಮ್ಮ ಕರ್ನಾಟಕ ರಾಜ್ಯದ ನಿನ್ನೆಗಳನ್ನು ತಿಳಿಯದೇ, ಇಂದು ನಾವು ನಾಳಿನ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ನಿನ್ನೆಯ ಇತಿಹಾಸ, ನಮ್ಮ ಹಿರಿಯರ ಸಾಧನೆಗಳನ್ನು ಪರಿಚಯಿಸಿದರೆ ನಮ್ಮಲ್ಲಿ ಸ್ಪೂರ್ತಿ ತುಂಬುತ್ತದೆ. ನಮ್ಮ ಮೈಗಳಲ್ಲಿ ಹರಿಯುತ್ತಿರುವ ರಕ್ತ ಕೆಂಪು ನೀರಲ್ಲ, ಅದು ಸಾಮ್ರಾಜ್ಯಗಳನ್ನು ಕಟ್ಟಿದ, ರಕ್ಷಿಸಿದ, ವೈಭವಯುಗಕ್ಕೆ ಕಾರಣವಾದ ಹೆಮ್ಮೆಯ ಅಮೃತವಾಹಿನಿ ಎಂಬ ಅರಿವುಂಟು ಮಾಡುತ್ತದೆ.
ಹಿಂದೆ, ಅಂದರೆ ಕ್ರಿ.ಶ. ೩ನೇ ಶತಮಾನದ ಸುಮಾರಿಗೆ ಶಿವಮೊಗ್ಗ ಸಮೀಪದ ಸೊರಬ ಬಳಿಯ ತಾಳಗುಂದವೆಂಬ ಹಳ್ಳಿಯ ಒಬ್ಬ ಯುವಕ, ಅಂದಿನ ಪಲ್ಲವ ರಾಜಧಾನಿ ಕಂಚಿಗೆ ವಿದ್ಯೆ ಕಲಿಯಲು ಹೋದನಂತೆ. ಅವರಿಂದ ಅಪಮಾನಿತನಾದ ಆ ಕನ್ನಡಿಗ , ಶಸ್ತ್ರದೀಕ್ಷೆ ತೆಗೆದುಕೊಂಡು, ಸೈನ್ಯ ಕಟ್ಟಿ ತಮಿಳು ಪಲ್ಲವರನ್ನು ತನ್ನ ತಾಯ್ನಾಡಿನಿಂದ ಬಡಿದಟ್ಟಿದನಂತೆ. ಅವನೇ ಪಲ್ಲವರ ಸೊಕ್ಕು ಮುರಿದ ಕನ್ನಡದ ಹೆಮ್ಮೆಯ ಮೊಟ್ಟ ಮೊದಲ ರಾಜ. . . ಕದಂಬ ವಂಶ ಸ್ಥಾಪಕ. . . ಮಯೂರವರ್ಮ. ಶ್ರೀಶೈಲದ ಅರಣ್ಯಗಳಲ್ಲಿ ಸೈನ್ಯ ಸಂಘಟಿಸಿ ಪ್ರಜಾಪ್ರೀತಿಗಳಿಸಿ ಪಲ್ಲವರನ್ನು ಮಣ್ಣು ಮುಕ್ಕಿಸಿದ ಧೀರ ನಮ್ಮ ಮುಯೂರ.
ಕನ್ನಡದ ಮೊದಲ ರಾಜ ಮಯೂರನಾದರೂ, ಕನ್ನಡಿಗರ ಕರ್ನಾಟಕ ರತ್ನ ಸಿಂಹಾಸನವನ್ನು ಪ್ರತಿಷ್ಠಾಪಿಸಿದವರು ಬಾದಾಮಿಯ ಚಾಲುಕ್ಯರು. ತಮಿಳು ಪಲ್ಲವರಿಗೂ ಕನ್ನಡಿಗ ಚಾಲುಕ್ಯರಿಗೂ ದಕ್ಷಿಣ ಭಾರತದ ಮೇಲಿನ ಸಾರ್ವಭೌಮತ್ವಕ್ಕಾಗಿ ಇತಿಹಾಸದುದ್ದಕ್ಕೂ ಘನಘೋರ ಸಂಗ್ರಾಮಗಳು ನಡೆದವು. ಇಂತಹ ಚಾಲುಕ್ಯ ವಂಶದ ಪ್ರಮುಖ ದೊರೆ ಇಮ್ಮಡಿ ಪುಲಿಕೇಶಿ. ಇವನ ಕಾಲದಲ್ಲಿ ಉತ್ತರ ಭಾರತವನ್ನು ಹರ್ಷವರ್ಧನವೆಂಬ ಸಾರ್ವಭೌಮ, ಇಂದಿನ ಉತ್ತರಪ್ರದೇಶದಲ್ಲಿರುವ ಕನೋಜಿನಿಂದ ಆಳುತ್ತಿದ್ದನು. ಅವನು ಪರಾಕ್ರಮಿ, ಉತ್ತರಾಪಥೇಶ್ವರನೆಂಬ ಬಿರುದಾಂಕಿತ. ಇವನು ಪುಲಿಕೇಶಿಯನ್ನು ಜಯಿಸಿ ಇಡೀ ಭಾರತವನ್ನು ಆಳಬೇಕೆಂಬ ಬಯಕೆಯಿಂದ ದಕ್ಷಿಣದೆಡೆಗೆ ತನ್ನ ಭಾರಿ ಸೈನ್ಯದೊಂದಿಗೆ ಯುದ್ದಕ್ಕೆ ಬಂದವನು. ನರ್ಮದಾ ನದಿಯ ತೀರದಲ್ಲಿಯೇ ಪುಲಿಕೇಶಿಯ ಸೈನ್ಯ ಅವನನ್ನು ಸೋಲಿಸಿತು. ಸೋತ ಹರ್ಷವರ್ಧನ ಕನ್ನಡಿಗ ಪುಲಿಕೇಶಿಗೆ ಕಪ್ಪ ಕಾಣಿಕೆಗಳನ್ನು ಕೊಟ್ಟನಂತೆ. ಆಗ ಪುಲಿಕೇಶಿಯ ಸೈನ್ಯದಲ್ಲಿ ಆನೆಗಳೇ ೬೦,೦೦೦ದಷ್ಟಿದ್ದವಂತೆ. ಕನ್ನಡಿಗರ ಪಡೆಯನ್ನು ಅಂದು ರಾಕ್ಷಸಪಡೆ, ಯಾರಿಂದಲೂ ಜಯಿಸಲಾಗದ ಸೈನ್ಯವೆಂದು ಕರೆಯುತ್ತಿದ್ದರಂತೆ . ಹೀಗೆ ಹರ್ಷನನ್ನು ಸೋಲಿಸಿ ಪುಲಿಕೇಶಿಯು ಪರಮೇಶ್ವರ ಎಂಬ ಬಿರುದನ್ನು ಪಡೆದನಂತೆ. ಅಂದಿನಿಂದಲೇ ಉತ್ತರ ಭಾರತದ ಇತಿಹಾಸ ಮುಕ್ಕಾಗಿ ಹೋಯ್ತು. ದಕ್ಷಿಣದಲ್ಲಿ ಪುಲಿಕೇಶಿ ಕಂಚಿಯವರೆಗೂ ದಂಡೆತ್ತಿ ಹೋಗಿ ತಮಿಳು ಪಲ್ಲವರನ್ನು ಮಣ್ಣು ಮುಕ್ಕಿಸಿದ್ದ. ನಂತರದಲ್ಲಿ ರಾಷ್ಟ್ರಕೂಟ ದೊರೆಗಳು ಮಳಖೇಡದಿಂದ ಆಳತೊಡಗಿದರು.
ಕರ್ನಾಟಕ ರತ್ನಸಿಂಹಾಸನ ಸ್ಥಾಪಕರು ಚಾಲುಕ್ಯರಾದರೆ, ಅದನ್ನು ವೈಭವವಾಗಿ ಆಳಿದವರು ರಾಷ್ಟ್ರಕೂಟರು. ಇವರಲ್ಲೊಬ್ಬ ದೊರೆ ಮೂರನೇ ಗೋವಿಂದ. ಇವನ ಆಳ್ವಿಕೆಯಲ್ಲಿ ಕನ್ನಡಿಗರ ಶೌಯ೯ ಸಾಹಸಗಳು ಇಡೀ ಭರತ ಖಂಡದಲ್ಲೇ ಮನೆ ಮಾತಾಗಿದ್ದು ದಕ್ಷಿಣದ ಶ್ರೀಲಂಕಾದಿಂದ ಉತ್ತರದ ಹಿಮಾಲಯದ ತುದಿಯವರೆಗೆ: ಪೂರ್ವದ ವಾರಾಣಾಸಿಯಿಂದ ಪಶ್ಚಿಮದಲ್ಲಿ ಗುಜರಾತಿನ ಭುರ್ಜದವರೆಗೆ, ಕನ್ನಡಿಗರ ಸಾಮ್ರಾಜ್ಯ ಹಬ್ಬಿತ್ತು. ಇಂತಹ ಪ್ರತಾಪಶಾಲಿ ಗೋವಿಂದನ ಮಗನ ಹೆಸರು ಶರ್ವ. ಇವನೇ ನಮ್ಮ ಮೆಚ್ಚಿನ ಅಮೋಘವರ್ಷ ನೃಪತುಂಗ. ೧೬ನೇ ವಯಸ್ಸಿನಲ್ಲೇ ಪಟ್ಟಕ್ಕೇರಿದ ಇವನ ಕಾಲ ಕನ್ನಡಿಗರ ಇತಿಹಾಸದ ಒಂದು ಸುವರ್ಣಯುಗ. ಇವನ ಆಳ್ವಿಕೆಯಲ್ಲಿ ಒಮ್ಮೆ ಬರಗಾಲ ಬಂದಾಗ, ಕೊಲ್ಲೂರು ಮೂಕಾಂಬಿಕೆಗೆ ತನ್ನ ಬೆರಳನ್ನು ಬಲಿಕೊಟ್ಟ ಜನಪ್ರೇಮಿ ರಾಜ ಈತ. ರಾಜದ್ರೋಹಕ್ಕಾಗಿ ತನ್ನ ಸ್ವಂತ ಮಗನಿಗೇ ಮರಣದಂಡನೆ ವಿಧಿಸಿದಂತಹ ನಿಷ್ಪಕ್ಷಪಾತ ಧೋರಣೆ ಇವನದ್ದು.
ಗೆಳೆಯರೇ, ಹುಲಿ ಕೊಂದ ಧೀರನ ಕಥೆ ನಿಮಗೆಲ್ಲಾ ಗೊತ್ತಲ್ಲವೇ? ಗುರುಕುಲದಲ್ಲಿ ಪಾಠ ಕೇಳುವಾಗ ನುಗ್ಗಿದ ಹುಲಿಯನ್ನು ಏಕಾಂಗಿಯಾಗಿ ಹೋರಾಡಿ ಕೊಂದ ಸಳ ಹೊಯ್ಸಳ ವಂಶದ ಸ್ಥಾಪಕ, ಇವನ ಶೌಯ೯ದ ಪ್ರತೀಕವೇ ಹೊಯ್ಸಳ ರಾಜಲಾಂಛನ. ಇಂತಹ ಹೊಯ್ಸಳರು ಹಳೇಬೀಡಿನಿಂದ ಆಳುತ್ತಿದ್ದರು. ಇವರ ಪ್ರಮುಖ ದೊರೆ ವಿಷ್ಣುವರ್ಧನ. ಇವನು ಇಡೀ ದಕ್ಷಿಣ ಭಾರತದ ಮೇಲೆ ತನ್ನ ಅಧಿಪತ್ಯ ಸಾಧಿಸಿದ್ದನು. ಇಂತಹ ಹೊಯ್ಸಳರ ಕಾಲದಲ್ಲೇ ಗರುಡರೆಂಬ ಸಂಸ್ಕೃತಿ ನಮ್ಮಲ್ಲಿತ್ತು. ಗರುಡರೆಂದರೆ , ರಾಜನಿಗಾಗಿ ಜೀವಿಸುವ ನಿಷ್ಠಾವಂತ ಜನರೆಂದು. ಇವರು ಹೊಯ್ಸಳ ರಾಜನಿಗೆ ನಿಷ್ಠರಾಗಿದ್ದು, ರಾಜನ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಹಿಂದು ಮುಂದು ನೋಡದ ಪ್ರತಿಜ್ಞಾಬದ್ಧರು. ರಾಜನ ಮರಣಾನಂತರ ತಮಗೆ ಬದುಕುವ ಹಕ್ಕಿಲ್ಲವೆಂದು ಭಾವಿಸಿ ಪ್ರಾಣತ್ಯಾಗ ಮಾಡುತ್ತಿದ್ದರೆಂತೆ. ಇಂತಹ ಧ್ಯೇಯನಿಷ್ಠ ಪಡೆ ಕನ್ನಡಿಗರದ್ದು. ಹೊಯ್ಸಳ ಪರಂಪರೆಯಲ್ಲಿನ ೩ನೇ ಬಲ್ಲಾಳನೆಂಬ ರಾಜನದ್ದು ಸಾಹಸಗಾಥೆ. ಉತ್ತರದಿಂದ ಮುಸಲ್ಮಾನ ದೊರೆಗಳೆಲ್ಲಾ ಪರಸ್ಪರ ಭೇದಭಾವ ಮರೆತು ಸಂಘಟಿತರಾದಾಗ ಅವರ ವಿರುದ್ಧ ಹೋರಾಡಬೇಕೆಂಬ ತತ್ವ ಮನಗಂಡು ಅದಕ್ಕಾಗಿ ಜೀವನ ಮುಡಿಪಿಟ್ಟ ಧೀರ ಇವನು. ಇವನ ಪ್ರಯತ್ನ ಪೂರ್ಣ ಫಲಿಸದೆ ಇದ್ದರೂ ಮುಂದೆ ಇವನ ಕನಸು ವಿಜಯನಗರದ ರೂಪದಲ್ಲಿ ನನಸಾಯಿತು.
ಗೆಳೆಯರೇ, ಇಡೀ ಪ್ರಪಂಚದಲ್ಲಿ ಅಧಿಕಾರ ಲಾಲಸೆ ಇಲ್ಲದೆ ಕೇವಲ ಧರ್ಮ ಸಂಸ್ಥಾಪನೆ ಮತ್ತು ಪರದೇಶಿಯರ ಆಕ್ರಮಣಗಳಿಂದ ರಾಷ್ಟ್ರ ರಕ್ಷಣೆಯ ಧ್ಯೇಯೋದ್ದೇಶದಿಂದ ಸ್ಥಾಪಿತವಾದ ಏಕೈಕ ಸಾಮ್ರಾಜ್ಯ, ನಮ್ಮೆಲ್ಲರ ಹೆಮ್ಮೆಯ ವಿಜಯನಗರ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆ. ಹಂಪೆ ಅಂದು ಅರವತ್ತು ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಅಂದರೆ ಇಂದಿನ ನಮ್ಮ ಬೆಂಗಳೂರಿನ ಜನಸಂಖ್ಯೆಯಷ್ಟು ಪ್ರಜೆಗಳಿಂದ ಕೂಡಿತ್ತಂತೆ. ಈ ಹಂಪೆಯೇ ರಾಮಾಯಣದ ಹನುಮಂತನ ತವರೂರಾದ ಕಿಷ್ಕಿಂಧೆ. ಈ ಸ್ಥಳದಲ್ಲೇ ರಾಜರ್ಷಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹರಿಹರರಾಯ ಬುಕ್ಕರಾಯರು ( ಹಕ್ಕ- ಬುಕ್ಕ ) ವಿಜಯನಗರವನ್ನು ಸ್ಥಾಪಿಸಿದರು. ಭೂಮಿಯನ್ನು ಅಂದು ಹಿರಣ್ಯಾಕ್ಷನಿಂದ ಕಾಪಾಡಿದ್ದ ವರಹಾ ದೇವರೇ ಇವರ ರಾಜಲಾಂಛನ. ೨೩೦ ವರ್ಷಗಳ ಕಾಲದ ವಿಜಯನಗರ ಸಾಮ್ರಾಜ್ಯವೇ ಕನ್ನಡಿಗರ ಇತಿಹಾಸದ ಅತ್ಯಂತ ವೈಭವಯುತ ದಿನಗಳು. ಈ ವಿಜಯನಗರ ಸಾಮ್ರಾಜ್ಯದ ಅತ್ಯಂತ ಖ್ಯಾತನಾದ ರಾಜ ಶ್ರೀ ಕೃಷ್ಣದೇವರಾಯ. ಇವನ ಬಿರುದು ಕನ್ನಡರಾಜ್ಯ ರಮಾರಮಣ. ಇವನು ಸೋಲರಿಯದ ಭೂಪ. ದೂರದೃಷ್ಟಿ , ನಿರ್ದಿಷ್ಟಯೋಜನೆ, ಧೃಡ ನಿಷ್ಠೆ, ಸತತ ಪ್ರಯತ್ನಗಳೇ ಇವನ ಗುಣಗಳು. ಒರಿಸ್ಸಾದ ಕಟಕ್ ಅನ್ನು ಕೂಡಾ ಗೆದ್ದ ರಾಯ, ದಕ್ಷಿಣದ ಮಧುರೆಯವರೆಗೂ ಕನ್ನಡ ಸಾಮ್ರಾಜ್ಯ ಹರಡಿದ್ದ.
ಮಿತ್ರರೇ, ವಿಜಯನಗರದ ಪತನದೊಂದಿಗೆ ಕನ್ನಡಿಗರ ವೈಭವ ಮುಗಿದುಹೋಯ್ತು. ಅದೊಂದು ದುರಂತ ಕಥೆ. ಇರಲಿ. ಆದರೆ ಐತಿಹಾಸಿಕವಾಗಿ ಕ್ರಿ.ಶ. ೬ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಸಾವಿರ ವರ್ಷಗಳಷ್ಟು ಕಾಲ ನಿರಂತರವಾಗಿ ಭಾರತದೇಶದಲ್ಲಿ ಅತ್ಯಂತ ಪರಾಕ್ರಮಿ, ಯಶಸ್ವಿ ಆಳ್ವಿಕೆಗಾರರಾಗಿದ್ದ ಕನ್ನಡಿಗರು ಅಂತಹ ಸಾಧನೆ ಮಾಡಲು ಅನುವಾದ ಅಂದಿನ ಕನ್ನಡಿಗರಲ್ಲಿ ಮನೆಮಾಡಿದ್ದ ಗುಣ ವಿಶೇಷಗಳೇನು?
ಸ್ವಾಭಿಮಾನದ ಕಿಚ್ಚು ಮಯೂರನಲ್ಲಿತ್ತು. ಶತ್ರುಗಳನ್ನು ಸದೆಬಡಿವ ಕಿಚ್ಚು, ಪೌರುಷ, ಅಗಾಧವಾದ ತೋಳ್ಬಲ ಪುಲಿಕೇಶಿಯಲ್ಲಿತ್ತು. ಅಂದು ಪುಲಿಕೇಶಿಗೆ ನಿಷ್ಠರಲ್ಲದ ಯಾರೊಬ್ಬ ರಾಜನೂ ಇರಲಿಲ್ಲವೆಂದರೆ ಅವನ ಜನಪ್ರಿಯತೆಯ ಆಳವನ್ನು ಅರಿತುಕೊಳ್ಳಿ. ಏಕಾಂಗಿಯಾಗಿದ್ದ ಬರಿಗೈ ಕನ್ನಡಿಗ, ಮಯೂರ ವರ್ಮ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು , ಪ್ರಜೆಗಳನ್ನು ಸಂಘಟಿಸಿ ಸೈನ್ಯ ಕಟ್ಟಿದ ರೀತಿಯನ್ನು ಗುರುತಿಸಿ . ಧರ್ಮರಕ್ಷಣೆಗಾಗಿಯೇ ಜನ್ಮ ತಳೆದ ವಿಜಯನಗರದ ಸೈನ್ಯದಲ್ಲಿ ಹನ್ನೊಂದು ಲಕ್ಷ ಸೈನಿಕರಿದ್ದರೆ ಹಂಪೆಯೊಂದರಲ್ಲೇ ಒಂದು ಲಕ್ಷದಷ್ಟು ಸೈನಿಕರಿದ್ದರಂತೆ. ನಿಸ್ವಾರ್ಥತೆ, ಉದಾತ್ತಧ್ಯೇಯ, ನಿಖರವಾದ ಗುರಿ ನಿರಂತರ ಪ್ರಯತ್ನ , ಇವೆಲ್ಲಕ್ಕೂ ಕಳಶವಿಟ್ಟಂತೆ ಎದೆ ತುಂಬಿನಿಂತ ಸ್ವಾಭಿಮಾನ , ಉಜ್ವಲವಾದ ನಾಡಪ್ರೇಮ . . . . ಇವೇ ನಮ್ಮವರ ಯಶಸ್ಸಿಗೆ ಕಾರಣವಲ್ಲವೇ? ಕನ್ನಡದ ರಾಜರುಗಳನ್ನು ಮತ್ತು ಕನ್ನಡ ಜನರನ್ನು ಕವಿ ``ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಭಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದರೆ ಇವರು ಸಾಧು ಜನಕ್ಕೆ ಸಾಧುಗಳು. ಮಧುರವಾಗಿ ವ್ಯವರಿಸುವಂತೆ ಜೊತೆ ಮಧುರವಾಗಿ ಇರುವರು, ತೊಂದರೆ ಕೊಟ್ಟು ಕನ್ನಡಿಗರನ್ನು ಕೆಣಕುವ, ಕಾಡಲು ಬರುವ ವ್ಶೆರಿಗಳಿಗೆ ಕಲಿಯುಗ ಯಮನಾಗಿ ಇರುವವರು ಎ೦ದು ವರ್ಣಿಸಿದ್ದಾನೆ. ಹ್ಯೂಯನ್ ತ್ಸ್ಯಾ೦ಗ್ ಎಂಬ ಚೀನಿ ಯಾತ್ರಿಕ ಕನ್ನಡಿಗರನ್ನು ಎತ್ತರದ ನಿಲುವಿನ , ನೇರ ನಡೆನುಡಿಯ, ಕಪಟವನ್ನರಿಯದ, ಶರಣಾಗತರಿಗೆ ರಕ್ಷಣೆ ನೀಡುವ, ನ೦ಬಿದವರಿಗಾಗಿ ಪ್ರಾಣ ನೀಡುವ, ಮೃದು ಮಾತಿನ ಉನ್ನತ ಸ೦ಸ್ಕಾರವ೦ತ ಜನರು ಎ೦ದು ಕರೆದಿದ್ದಾನೆ.
ಗೆಳೆಯರೇ ನಾಯಕತ್ವಕ್ಕೆ ನಿಷ್ಠೆ ನಮ್ಮ ರಕ್ತದ ಗುಣವಾಗಿತ್ತು ರಾಜನಿಗಾಗೇ ಪ್ರಾಣ ನೀಡುವ ಹರಕೆ ಹೊತ್ತ ಗರುಡ ಸ೦ಸ್ಕೃತಿ ನಮ್ಮದು. ಪ್ರಜೆಗಳ ಹಿತಕ್ಕಾಗಿ ಕೈಬೆರಳನ್ನು ಬಲಿಕೊಟ್ಟ ರಾಜ ನಮ್ಮವನು. ನ್ಯಾಯಕ್ಕಾಗಿ ಸ್ವ೦ತಮಗನಿಗೇ ಮರಣದ೦ಡನೆ ವಿಧಿಸಿದ ನ್ಯಾಯ ಪಕ್ಷಪಾತಿಗಳ ವ೦ಶ ನಮ್ಮದು.
ಹಾಗಾದರೆ ನಮ್ಮ ಸಾಮ್ರಾಜ್ಯ ಅ೦ದಿನ ನಮ್ಮ ವೈಭವ ಇ೦ದೇಕೆ ಮರೆಯಾಯ್ತು? ವಿಜಯನಗರದ ನ೦ತರ ನಮ್ಮಲ್ಲಿ ಧೀರ ಶೂರ ದೇಶಭಕ್ತರು ಜನಿಸಲೇ ಇಲ್ಲವೆ? ಇಡೀ ಕನ್ನಡ ಸಾಮ್ರಾಜ್ಯ ಪಾಳುಬಿದ್ದು ಹೋದರೂ ಅಲ್ಲಲ್ಲಿ ಕನ್ನಡ ಕೇಸರಿಗಳು ಇದ್ದೇ ಇದ್ದರು.
ಹ೦ಪೆಯ ಪತನವಾದ ನ೦ತರ ವಿಜಯನಗರದ ಸಾಮ೦ತರು, ಒಬ್ಬೊಬ್ಬರೂ ಸ್ವತ೦ತ್ರರಾಗಲು ತೊಡಗಿದ್ದಾಗ, ಎಲ್ಲರನ್ನೂ ಮತ್ತೆ ರಾಯರ ಅಧೀನಕ್ಕೆ ತರಲು ವೀರಾವೇಶದಿ೦ದ ಹೋರಾಡಿದ ಎಚ್ಚಮನಾಯಕನ ಶೌಯ೯ ಅರಿಯದವರಾರು? ವಿಜಯನಗರದಿ೦ದ ಸಿಡಿದು ಸ್ವತ೦ತ್ರವಾದ ಕೆಳದಿ ಸ೦ಸ್ಥಾನವನ್ನು ಮು೦ದೊಮ್ಮೆ ಆಳಿದ, ಕೆಳದಿಯ ಚೆನ್ನಮ್ಮನ ಹೆಸರು ಕೇಳಿಹಿರಷ್ಟೆ? ಔರ೦ಗಜೇಬನ ಸೈನ್ಯ ಶಿವಾಜಿಯ ಮಗ ರಾಜಾರಾಮನನ್ನು ಬೆನ್ನಟ್ಟಿ ಬ೦ದಾಗ ಆಶ್ರಯ ನೀಡಿದ ಧೀರ ರಾಣಿ ಅವಳು.
ಚಿತ್ರದುರ್ಗದ ಮದಕರಿನಾಯಕರ ಹೆಸರು ಕೇಳದವರಾರು? ತನ್ನ ನಿಷ್ಠಾವ೦ತ ಪಡೆಯಿಂದ, ಹೈದರಾಲಿಯ ಸೈನ್ಯವನ್ನು ಒಂದು ವರ್ಷ ೬ ತಿಂಗಳು ಕಾಲ ಚಿತ್ರದುರ್ಗ ಕೋಟೆಯ ಬಾಗಿಲಲ್ಲೇ ತಡೆ ಹಿಡಿದಿದ್ದ ಧೀರ ಈತ. ಯುದ್ದದಲ್ಲೂ ಶೌರ್ಯದಿಂದ ಸೆಣಸಿ, ಕೊನೆಗೆ ಹೈದರಾಲಿಯ ಕುತಂತ್ರಕ್ಕೆ ಸಿಕ್ಕಿ ಸೆರೆಯಾದಾಗ, ತನ್ನ ತಲೆಯನ್ನು ತಾನೆ ಕತ್ತರಿಸಿಕೊಂಡ ವೀರ -ಮದಕರಿನಾಯಕ. ಬರಿಯ ಒನಕೆಯಿಂದಲೇ ವೈರಿಪಡೆಯನ್ನು ನುಚ್ಚುನೂರು ಮಾಡಿದ ಓಬವ್ವನ ದೇಶಪ್ರೇಮ , ಶೌರ್ಯ ಯಾವ ದೇಶಭಕ್ತನಿಗೂ, ಶೂರಾಧಿಶೂರನಿಗೂ ಕಡಿಮೆ ಇಲ್ಲ.
ಹಾಗೆಯೇ ಮೈಸೂರಿನ ಮಹಾರಾಜನಾಗಿದ್ದ ರಣಧೀರ ಕಂಠೀರವನ ಪರಾಕ್ರಮ ಬಲ್ಲಿರೇನು ? ಆತ ಪ್ರತಿನಿತ್ಯ ಒಂದು ಎಮ್ಮೆಗರುವನ್ನು ಬೆನ್ನಮೇಲೆ ಹೊತ್ತುಕೊಂಡು ಚಾಮುಂಡಿ ಬೆಟ್ಟ ಹತ್ತುತ್ತಿದ್ದನಂತೆ. ಒಮ್ಮೆ ತಿರುಚಿನಾಪಳ್ಳಿಯಲ್ಲಿ ಒಬ್ಬ ತಮಿಳು ಜಟ್ಟಿ ಸೋಲಿಲ್ಲವೆಂಬ ಮದದಿಂದ ಎಲ್ಲರಿಗೂ ಸವಾಲು ಹಾಕಿ ತನ್ನ ಚಡ್ಡಿಯನ್ನು ಊರ ಹೆಬ್ಬಾಗಿಲಿಗೆ ತಗುಲಿ ಹಾಕಿಸಿದ್ದನಂತೆ. ಓಡಾಡುವವರೆಲ್ಲಾ ಅದರ ಕೆಳಗೇ ಓಡಾಡಬೇಕಿತ್ತು. ಆಗ ಮಾರುವೇಷದಿಂದ ಅಲ್ಲಿಗೆ ಹೋಗಿ, ಆ ಜಟ್ಟಿಗೆ ಮಣ್ಣು ಮುಕ್ಕಿಸಿ ಕನ್ನಡಿಗರ ವಿಜಯಪತಾಕೆ ಹಾರಿಸಿ ಬಂದ ಧೀರ ನಮ್ಮ ರಣಧೀರ ಕಂಠೀರವ.
ತನ್ನ ಮೇಲೆ ದಂಡೆತ್ತಿ ಬಂದ ಥ್ಯಾಕರೆ ಎಂಬ ಇಂಗ್ಲೀಷ್ ಅಧಿಕಾರಿಯನ್ನು ರಣರಂಗದಲ್ಲಿ ಕೊಂದು ಹಾಕಿ, ರಣಚಂಡಿಯಾಗಿ ಆರ್ಭಟಿಸಿದ ಹೆಮ್ಮೆಯ ಕನ್ನಡತಿ ಕಿತ್ತೂರು ಚೆನ್ನಮ್ಮ . ಗೆಳೆಯರೇ . ಕನ್ನಡದ ಹೆಣ್ಣುಮಕ್ಕಳೂ ಕೂಡ ಶೌರ್ಯವಂತರೇ ಎನ್ನಲು ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಇವರುಗಳು ಸಾಲದೇ ? ಚೆನ್ನಮ್ಮನ ಸೆರೆಯ ನಂತರ ಕಿತ್ತೂರ ಸ್ವಾತಂತ್ರ್ಯಕ್ಕೆ ಅತ್ಯಂತ ಧೀರತನದಿಂದ ಹೋರಾಡಿ ವೀರ ಮರಣವನ್ನಪ್ಪಿದವನು ಸಂಗೊಳ್ಳಿ ರಾಯಣ್ಣ.
ಇವರೆಲ್ಲರ ಜೊತೆ ನಮ್ಮ ಬೆಂಗಳೂರು ನಗರ ನಿರ್ಮಾಣ ಮಾಡಿದ ಮಾಗಡಿ ಕೆಂಪೇಗೌಡರನ್ನು ಮರೆಯಲು ಸಾಧ್ಯವೇ ? ವಿಜಯನಗರ ಆಳರಸರ ಸಾಮಂತರಾಗಿದ್ದ , ಯಲಹಂಕ ಪ್ರಭುಗಳಾದ ಕೆಂಪೇಗೌಡರು ಯುವರಾಜರಾಗಿದ್ದಾಗಲೊಮ್ಮೆ ಹಂಪೆಗೆ ಹೋಗಿ, ಅಲ್ಲಿ ಏರ್ಪಡಿಸಿದ್ದ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲರನ್ನೂ ಗೆದ್ದರಂತೆ. ಕೊನೆಗೆ ದೊರೆ ಶ್ರೀ ಕೃಷ್ಣದೇವರಾಯನ ಅಳಿಯನಾದ ತಿರುಮಲರಾಯನೇ ಮಲ್ಲಯುದ್ಧಕ್ಕೆ ಬಂದಾಗ ಅವನನ್ನೂ ಗೆದ್ದು ಶ್ರೀ ಕೃಷ್ಣದೇವರಾಯನಿಂದ ಮೆಚ್ಚುಗೆ ಗಳಿಸಿದರಂತೆ. ಇವರು ಅಂದಿನ ಹಂಪೆಯನ್ನು ಕಂಡು ಪ್ರಭಾವಿತರಾಗಿ ಇಂತಹುದೇ ನಗರವನ್ನು ತಾನೂ ನಿರ್ಮಿಸಬೇಕೆಂದು ಬೆಂಗಳೂರನ್ನು ನಿರ್ಮಿಸಿದರಂತೆ. ಇವರ ಶೌಯ೯ ಸಾಹಸಗಳಷ್ಟೇ ಪ್ರಜಾ ಪ್ರೇಮವೂ ಅಪ್ರತಿಮವಾದುದು. ಇವರಷ್ಟೇ ಅಲ್ಲ ಇವರ ಕುಟುಂಬದ ಸದಸ್ಯರ ಪ್ರಜಾಪ್ರೀತಿಯೂ ಕೂಡ ಮಹತ್ತರವಾಗಿತ್ತು. ಬೆಂಗಳೂರು ನಗರ ನಿರ್ಮಾಣ ಸಮಯದಲ್ಲಿ ನಗರದ ಕೋಟೆ ಬಾಗಿಲು ಎಷ್ಟು ಬಾರಿ ಕಟ್ಟಿದರೂ ಉರುಳುರುಳಿ ಬೀಳುತ್ತಿತ್ತಂತೆ. ಕುಲ ಪುರೋಹಿತರು ಇದಕ್ಕೆ ಪರಿಹಾರವಾಗಿ ಗರ್ಭಿಣಿ ಹೆಣ್ಣೊಬ್ಬಳ ಬಲಿ ನೀಡಬೇಕೆಂದರಂತೆ. ಇಂತಹ ಹೀನಕೃತ್ಯಕ್ಕೆ ಒಪ್ಪದ ಗೌಡ ಕೋಟೆಯ ನಿರ್ಮಾಣವನ್ನೇ ಕೈಬಿಡಲು ತೀರ್ಮಾನಿಸಿದರಂತೆ. ಆದರೆ ನಾಡಿನ ಹಿತಕ್ಕಾಗಿ ಕೆಂಪೇಗೌಡರ ಸೊಸೆಯಾದ ಲಕ್ಷ್ಮಮ್ಮ ತನ್ನನ್ನೇ ಬಲಿ ಕೊಟ್ಟು ಕೊಂಡಳಂತೆ. ಇಂತಹ ತ್ಯಾಗಮಯಿಯ ಸ್ಮಾರಕವಾಗಿ ಕೋರಮಂಗಲದಲ್ಲಿ ದೇಗುಲವೊಂದನ್ನು ನಿರ್ಮಿಸಲಾಯಿತಂತೆ.
ಮುಂದೆ ಆಂಗ್ಲರಿಂದ ಮುಕ್ತಿ ಪಡೆಯಲು ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಲೂರು ವೆಂಕಟರಾಯ, ಶ್ರೀನಿವಾಸರಾವ್ ಕೌಜಲಗಿ. ಗಂಗಾಧರರಾವ್ ದೇಶಪಾಂಡೆಯಂತಹ ಮಹನೀಯರು ಕರ್ನಾಟಕದಿಂದ ಪಾಲ್ಗೊಂಡರು. ವಿದ
|